ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ.

ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು,
ಬೇಟೆಗಾರನ ಬಿಲ್ಲಿನಂತಿರುವೆ ನೀನು;
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳನಿತ್ತಿಹುದು.
ನವಿಲೂರಿನೊಳಗೆಲ್ಲ…

ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು;
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು.
ನವಿಲೂರಿನೊಳಗೆಲ್ಲ…

ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ;
ಶ್ರಮವೆಲ್ಲ ಹೊನ್ನಹುದು ವರ್ಷದಂತ್ಯದಲಿ;
ನಿನ್ನ ತಟ್ಟೆಯ ತುಂಬ ಅನ್ನ ನೊರೆಹಾಲು;
ನನ್ನ ನುಡಿಯನು ಕೇಳು; ನನ್ನೊಡನೆ ಬಾಳು.
ನವಿಲೂರಿನೊಳಗೆಲ್ಲ…

ನಿನ್ನೊಲುಮೆ ತಾರೆಗಳ ಹರಡಿರುವ ಬಾನು;
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ.
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು;
ಮುಂದೆ ಹೋಗೆನ್ನದಿರು ನನ್ನ ಮನದರಸಿ.
ನವಿಲೂರಿನೊಳಗೆಲ್ಲ…