ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ;
ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನು ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರುಮನೆ, ನೆನೆದಾಗ ನನ್ನ ಮನೆ-
ಹಳ್ಳಿಯೆರಡರ ಮುದ್ದು ಬಳ್ಳಿಯವಳು,
ಮುಚ್ಚುಮರೆಯಿಲ್ಲದೆಯೆ ಅಚ್ಚಮಲ್ಲಿಗೆಯಂತೆ
ಅರಳುತಿಹುದವಳ ಬದುಕು.
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂಥ ಹುಡುಗಿ
ನನ್ನೊಡವೆ, ನನ್ನ ಬೆಡಗಿ.
ಹಸುರುಸೀರೆಯನುಟ್ಟು, ಕೆಂಪುಬಳೆಗಳ ತೊಟ್ಟು
ತುಂಬುದನಿಯಲಿ ಕರೆವಳೆನ್ನ ಚೆಲುವೆ;
ಹಣೆಯನಾಳುವುದವಳ ಕುಂಕುಮದ ನಿಡುಬಟ್ಟು
ಲಕ್ಷ್ಮಿಯವಳೆನ್ನ ಮನೆಗೆ.
ನಮಗಿದುವೆ ಸೊಗಸು ಬದುಕಿನ ಬಣ್ಣಗಳ ಸಂತೆ
ನಮಗಿಲ್ಲ ನೂರು ಚಿಂತೆ;
ನಾವು ಗಂಧರ್ವರಂತೆ.

ತೆಂಗುಗರಿಗಳ ಮೇಲೆ ತುಂಬುಚಂದಿರ ಬಂದು
ಬೆಳ್ಳಿಹಸುಗಳ ಹಾಲ ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು, ಚಂದಿರನ ದಾಟುವೆವು
ಒಲುಮೆಯಳಗೊಂದು ನಾವು;
ನಮಗಿಲ್ಲ ನೋವು, ಸಾವು.